ಬೆಂಗಳೂರು, ಏಪ್ರಿಲ್ 8: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಒಟ್ಟಾರೆ ಶೇಕಡಾ 73.45 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಇಳಿಕೆ ಕಂಡುಬಂದಿದೆ.
ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ ಇಲಾಖೆಯ ಅಧಿಕೃತ ಜಾಲತಾಣಗಳಾದ karresults.nic.in ಮತ್ತು kseab.karnataka.gov.in ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಬಾರಿಯ ಫಲಿತಾಂಶದಲ್ಲಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಲಿಂಗವಾರು ಫಲಿತಾಂಶದ ವಿವರಗಳನ್ನು ಇಲಾಖೆ ಶೀಘ್ರದಲ್ಲೇ ಪ್ರಕಟಿಸಲಿದೆ.
ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನವನ್ನು ಗಳಿಸಿದೆ.
ಈ ಬಾರಿ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ರಾಜ್ಯಾದ್ಯಂತ ಒಟ್ಟು 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.
ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಮತ್ತು ಅಂಕಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆಗಳ ಕುರಿತಾದ ಮಾಹಿತಿಯನ್ನು ಇಲಾಖೆ ಪ್ರಕಟಿಸಲಿದೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ